ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ವಿಶಿಷ್ಟ ಸಂಯ್ಯೋಜನೆಯ ಹಿಮ್ಮೇಳವಿಲ್ಲದ ತರ್ಕ ಮದ್ದಳೆ : ``ಉರ್ವಶಿಯ ಸುತ್ತಮುತ್ತ ``

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶನಿವಾರ, ಜನವರಿ 17 , 2015

ಸದಾ ಹೊಸತನಗಳ ಅನ್ವೇಷಣೆಯಲ್ಲಿರುವ ಖ್ಯಾತ ರಂಗಕರ್ಮಿ ಉದ್ಯಾವರ ಮಾಧವಾಚಾರ್ಯರ ಚಿಂತನೆಯ ಪಲವಾಗಿ, ಸಮೂಹ ಸಂಯ್ಯೋಜನೆಯಲ್ಲಿ ಮೂಡಿಬಂದ ಇಡೀ ದಿನದ “ಉರ್ವಶಿಯ ಸುತ್ತಮುತ್ತ” ಎಂಬ ಚಿಂತನ ಮಂಥನ ಪ್ರದರ್ಶನದ ಅಂಗವಾಗಿ ಪ್ರದರ್ಶಿಸಲ್ಪಟ್ಟ, ಯಕ್ಷಗಾನ ರಂಗಭೂಮಿಯ ವಿಶಿಷ್ಟ ಪ್ರಯೋಗ. ಚೆಂಡೆ ಮದ್ದಳೆ ಭಾಗವತಿಕೆ ಇಲ್ಲದೇ ಪ್ರಣಯ ಪರಿತ್ಯಕ್ತೆಯ ಒಳಬೇಗುದಿಗೆ ಕೇವಲ ವಿಶಿಷ್ಟ ಸಂಭಾಷಣಾ ಸ್ಪರ್ಶ ನೀಡಲು ಪ್ರಯತ್ನಿಸಿದ ವಿಶಿಷ್ಟ “ತರ್ಕ ಮದ್ದಳೆ” ಕಾರ್ಯಕ್ರಮವು ಶೋತೃಗಳನ್ನು ಯಕ್ಷಗಾನ ರಂಗಭೂಮಿಯಲ್ಲಿ ಹೊಸತನದ ಲೋಕಕ್ಕೆ ಸೆಳೆದೊಯ್ಯಿತು.

ಕೇವಲ ಸಂಬಾಷಣೆ ಮಾತ್ರ ಇದ್ದು ತಾಳ ಮದ್ದಳೆ ಇಲ್ಲದ ಈ ಪ್ರಯೋಗವನ್ನು ತರ್ಕ ಮದ್ದಳೆ ಅನ್ನುವುದಕ್ಕಿಂತ ತರ್ಕ ಸಂವಾದ ಎನ್ನುವುದೇ ಸೂಕ್ತ ಅನ್ನಿಸುತ್ತದೆ. ಇನ್ನು ಮದ್ದಳೆ ಎಂಬ ಶಬ್ದ ಮದ್ದಳೆಯ ಪ್ರಯೋಗವಿಲ್ಲದ ಮೇಲೆ ಯಾಕೆ ಎಂಬ ಪ್ರಶ್ನೆ. ಮದ್ದಳೆ ಶಬ್ದ ಪ್ರಯೋಗ ಇಲ್ಲಿ ಕೇವಲ ಸಾಂಕೇತಿಕ. ಹಿನ್ನಲೆ ಇಲ್ಲದೆ ಮುನ್ನೆಲೆ ಮಾತ್ರವಾಗಿರುವ ಈ ಪ್ರಯೋಗದಲ್ಲಿ ಮದ್ದಳೆಗೆ ವಾದನ ರೂಪದ ನೆಲೆ ಇಲ್ಲ. ಒಂದು ಪರಂಪರೆಯ ಶಕ್ತಿಶಾಲಿ ಸಾಧನವಾಗಿ ತಾತ್ವಿಕ ನೆಲೆಯನ್ನು ಮದ್ದಳೆ ಶಬ್ದ ನೀಡುತ್ತದೆ.

ಯಕ್ಷಗಾನ ರಂಗಭೂಮಿಯ ಪ್ರಬಲ ರಂಗ ಸಾಧ್ಯತೆಯೇ ತಾಳ ಮದ್ದಳೆ ಅಥವಾ ಕೂಟ. ಜಗತ್ತಿನ ಯಾವ ರಂಗ ಪ್ರಕಾರದಲ್ಲೂ ಕಾಣ ಸಿಗದ ಆಶು ಸಂಬಾಷಣಾ ಕಥಾಭಿವ್ಯಕ್ತಿ. ಇತ್ತೀಚಿಗೆ ಅನೇಕ ಪ್ರತಿಭಾವಂತ ವಾಗ್ಮಿಗಳು ತಮ್ಮ ಅಪಾರ ಓದು, ವ್ಯಾಖ್ಯಾನ ಪರಿಣತಿ, ಅರ್ಥಗಾರಿಕೆ ಪ್ರತ್ಯುತ್ಪನ್ನಮತಿಗಳಿಂದ ಇದನ್ನು ಶ್ರೀಮಂತ ಕಲೆಯಾಗಿಸಿದ್ದಾರೆ. ಯಕ್ಷಗಾನ ಪ್ರಸಂಗ ಪಠ್ಯದ ಆಧಾರದಲ್ಲಿ ಸ್ವತಂತ್ರ ವಾಗ್ವಾದದ ಮಾಧ್ಯಮವಾಗಿ ಬೆಳೆದ ತಾಳಮದ್ದಳೆಯಲ್ಲಿ ಹಿಗ್ಗುತ್ತಾ ಬಂದಿರುವ ತಾರ್ಕಿಕ ವಿಶ್ಲೇಷಣೆಗೆ ಸಂಬಂಧಿಸಿ ಮೂಡಿಬಂದಿರುವ ಪರಿಕಲ್ಪಣೆಯೇ “ಉರ್ವಶಿ” ಎಂಬ ತರ್ಕಮದ್ದಳೆ.

ತಾಳಮದ್ದಳೆಯಲ್ಲಿ ಹಿನ್ನೆಲೆಯ ಗಾಯನ ವಾದನಗಳ ನಾದ ವೈಖರಿ ಯಕ್ಷಗಾನ ರಂಗಸ್ಥಳದ ಒಂದು ವಿಶಿಷ್ಟ ರಂಗ ಪ್ರಭಾವವನ್ನು ನಿರ್ಮಿಸುತ್ತದೆ. ಪ್ರಸಂಗದ ಕಾವ್ಯ ಪ್ರವಾಹದಲ್ಲಿ ಕಥೆಯ ಬೆಳವಣಿಗೆಗೆ ಅಗತ್ಯವಿರುವ ಅರ್ಥಗಾರಿಕೆ ಒಂದು ಶ್ರುತಿ ಸಾಮರಸ್ಯದ ಗುಂಗು ಇರುತ್ತದೆ. ಅರ್ಥಧಾರಿಗಳು ಈ ಶ್ರುತಿಯ ಒಳಗೆ ಮಾತನಾಡಿದಾಗ ಯಕ್ಷಗಾನದ ವಾತಾವರಣ ನಿರ್ಮಾಣವಾಗುತ್ತದೆ. ಭಾಗವತ, ಮದ್ದಳೆ ಮತ್ತು ಮಾತುಗಾರಿಕೆ ಒಂದೇ ಶ್ರುತಿಯಲ್ಲಿದ್ದರೆ ಮಾತು ಕೇಳಲು ಹಿತವಾಗಿರುತ್ತದೆ. ಭಾಷಣ ಮಾಡುವುದಕ್ಕೂ ಇಬ್ಬರು ವ್ಯಕ್ತಿಗಳು ಲೋಕಾಭಿರಾಮ ಮಾತನಾಡುವುದಕ್ಕೂ, ಯಕ್ಷಗಾನದ ಮಾತುಗಾರಿಕೆಗೂ ಅಜಗಜಾಂತರ ವ್ಯತ್ಯಾಸವಿದೆ. ತರ್ಕಮದ್ದಳೆಯ ಈ ಪ್ರಯೋಗದಲ್ಲಿ ವಾದನಗಳ ನುಡಿತದ ಯಾವತ್ತೂ ಪರಿಣಾಮ ಇಲ್ಲ. ನಾದದಾವರಣವನ್ನೇ ಹೊರಗಿಟ್ಟ ವಿಶಿಷ್ಟ ಪ್ರಯೋಗವಿದು.

ಸಾಮಾನ್ಯವಾಗಿ ಯಕ್ಷಗಾನ ಕಲಾವಿದರು ವೇಷಧರಿಸಿ ರಂಗಕ್ಕೆ ಬಂದು ಭಾಗವತಿಕೆಯ ನಂತರ ಗಂಟೆಗಟ್ಟಲೆ ಮಾತನಾಡಬಲ್ಲರೇ ಹೊರತು ವೇದಿಕೆಯಲ್ಲಿ ಐದು ನಿಮಿಷ ಮಾತನಾಡಲೂ ಹಿಂಜರಿಯುತ್ತಾರೆ. ಸನ್ಮಾನಕ್ಕೆ ಎರಡು ವಾಕ್ಯಗಳ ಉತ್ತರವನ್ನೂ ನೀಡದೇ ಮೌನವಾಗಿ ಸನ್ಮಾನ ಸ್ವೀಕರಿಸುವ ಅನೇಕ ಕಲಾವಿದರಿದ್ದಾರೆ. ಆದರೆ ವೇಷಧರಿಸಿ ರಂಗಕ್ಕೆ ಬಂದಾಗ ಪುಂಖಾನುಪುಂಕವಾಗಿ ಮಾತು ಹರಿದು ಬರುತ್ತದೆ. ಇದು ಈ ಶ್ರೀಮಂತ ಯಕ್ಷಗಾನ ಕಲೆಯ ಹೆಚ್ಚುಗಾರಿಕೆ. ತರ್ಕ ಮದ್ದಳೆಯಲ್ಲಿ ಇದ್ಯಾವುದೂ ಇಲ್ಲದೆ ಭಾಗವಹಿಸುವುದೆಂದರೆ ಹೆಚ್ಚಿನ ಎದೆಗಾರಿಕೆ ಬೇಕಾಗುತ್ತದೆ. ಆ ನೆಲೆಯಲ್ಲಿ ಅರ್ಜುನ-ಊರ್ವಶಿಯಯರ ಸುಮಾರು ಒಂದು ಗಂಟೆಯ ತಾಳಮದ್ದಳೆಯಲ್ಲಿ ಯಾವ ಹಿಮ್ಮೇಳದ ಬಲವಾದ ಬಲವಿಲ್ಲದೆ ಭಾಗವಹಿಸಿದ ಹಿರಿಯ ತಲೆಮಾರಿನ ಮತ್ತು ಈ ತಲೆಮಾರಿನ ಇಬ್ಬರು ಮಹಾನ್‌ ಕಲಾವಿದರು ‌ಅಭಿನಂದನಾರ್ಹರು.

ಬಹುಶ್ರುತರು, ವಿದ್ವಾಂಸರು, ತಾಳಮದ್ದಳೆಯಲ್ಲಿ ತರ್ಕ, ಭಾವ, ಬೌದ್ಧಿಕ ವಾಚಕಾಭಿನಯದಲ್ಲಿ ಸಿದ್ದಹಸ್ತರಾದ ಹಿರಿಯ ತಲೆಮಾರಿನ ಪ್ರಸಿದ್ದ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿಯವರ ಅರ್ಜುನನಿಗೆ, ಹವ್ಯಾಸಿ ರಂಗಭೂಮಿಯಿಂದ ವೃತ್ತಿಪರತೆಯ ಪ್ರಾವಿಣ್ಯದೆಡೆಗೆ ಧನಾತ್ಮಕ ನೋಟಗಳಿಂದ ಸಾಗುತ್ತಿರುವ ಸಮಕಾಲಿನ ಅರ್ಥಧಾರಿಗಳಲ್ಲಿ ಅಗ್ರಪಂಕ್ತಿಯಲ್ಲಿ ಒಬ್ಬರಾಗಿರುವ ತಾಳಮದ್ದಳೆ ಕ್ಷೇತ್ರದ ಆಶಾಕಿರಣ ವಾಸುದೇವ ರಂಗಭಟ್ಟರು ಊರ್ವಶಿಯಾಗಿ ಸಮರ್ಥ ಸ್ಪರ್ಧಿಯಾಗಿ ತರ್ಕಮದ್ದಳೆ ಯಶಸ್ವಿಯಾಗುವಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ.

ದೇವೇಂದ್ರನಿಂದ ಅರ್ಜುನನ ಬಿಡದಿಗೆ ಕಳುಹಿಸಲ್ಪಟ್ಟ ಊರ್ವಶಿಯ ಪೂರ್ವ ಪೀಠಿಕೆಯೊಂದಿಗೆ ಪ್ರಾರಂಭವಾದ ತರ್ಕ ಮದ್ದಳೆ ಬಳಿಕ ಅರ್ಜುನ-ಊರ್ವಶಿಯರ ಸಂಬಾಷಣೆಯಲ್ಲೇ ಸಾಗಿ ಪ್ರಣಯ ಪರಿತ್ಯೆಕ್ತೆಯ ಶಾಪಕ್ಕೆ ಗುರಿಯಾಗುವ, ಅರ್ಜುನನ ಬೇಗುದೆಯವರೆಗೆ ಸುಮಾರು ಒಂದುವರೆ ತಾಸು ನೆಡೆದ ಕಾರ್ಯಕ್ರಮ ಹಿಮ್ಮೇಳದ ಹೊರತಾಗಿಯೂ ಪ್ರೇಕ್ಷಕರಿಗೆ‌ ಎಲ್ಲಿಯೂ ನಿರಾಶೆ ಮೂಡಿಸಲಿಲ್ಲ. ನೀನು ನಿರ್ವೀಯ ನಪುಂಸಕನಾಗು ಎಂದು ಶಪಿಸುವ ಊರ್ವಶಿಯ ಶಾಪ ಪಾರ್ಥನಿಗೆ ಶಾಪ-ವರ ಎರಡೂ ಆಗುವ ಬಗೆಯನ್ನು ಕೇವಲ ಮಾತಿನ ಮಂಟಪದಲ್ಲಿ ಕೆತ್ತಿಕೊಟ್ಟ ಈರ್ವರು ಸಂಭಾಷಣಾವಾದಿಗಳು ಅಭಿನಂದನಾರ್ಹರು.

ಪಾರ್ಥನ ಭವಿಷ್ಯದ ಬದುಕನ್ನು ತಿಳಿದವರಿಗೆ ಸುಖಾಂತ್ಯವಾಗಿಯೂ ಕೇವಲ ತರ್ಕಮದ್ದಳೆ ಕೇಳುಗರಿಗೆ ದು:ಖ್ಖಾಂತ್ಯವಾಗಿಯೂ ಕಥೆ ವಿಶಿಷ್ಟ ಅನುಭವ ನೀಡುತ್ತದೆ. ಜೋಶಿಯವರ ಪರಿಸಮಾಪ್ತಿಯೊಂದಿಗೆ ತರ್ಕಮದ್ದಳೆಗೆ ತಾತ್ವಿಕ ಮುಕ್ತಾಯ ನೀಡಲಾಯಿತು. ಸಾಂಪ್ರದಾಯದ ಯಕ್ಷಗಾನ ಮತ್ತು ತಾಳಮದ್ದಳೆ ಕೇಳುಗರಿಗೆ ಹಿಮ್ಮೇಳವಿಲ್ಲದೇ ಕೇವಲ ಮಾತುಗಾರಿಕೆ ಆಸ್ವಾದಿಸಲು ಸ್ವಲ್ಪ ಕಷ್ಟವಾದರೂ ಸಹ ಯಕ್ಷಗಾನ ರಂಗಭೂಮಿಯಲ್ಲಿ ಇದೊಂದು ಹೊಸ ವಿಶಿಷ್ಟ “ಪ್ರಯೋಗ” ಎಂಬ ನೆಲೆಯಲ್ಲಿ ಇದು ಸ್ವೀಕಾರಾರ್ಹ ಎನ್ನಬಹುದು. ಇಂತಹ ಸಾಹಸಕ್ಕೆ ಕೈ ಹಾಕಿದ ಸಮೂಹದ ಉದ್ಯಾವರ ಮಾಧವ ಆಚಾರ್ಯರೂ, ಭಾಗವಹಿಸಿದ ಕಲಾವಿದರು. ಸಹಯೋಗ ನೀಡಿದ ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯವರೆಲ್ಲರೂ ಅಭಿನಂದನಾರ್ಹರು.





ತರ್ಕಮದ್ದಳೆಯ ರೂವಾರಿಗಳು - ಡಾ. ಎಂ. ಪ್ರಭಾಕರ ಜೋಶಿ ಮತ್ತು ವಾಸುದೇವ ರಂಗಭಟ್ಟರು



Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ